ಅಬ್ದುಲ್ ಗಫಾರ್ ಖಾನ್
	ಗಡಿನಾಡ ಗಾಂಧಿ ಎಂದು ಪ್ರಸಿದ್ಧರಾಗಿರುವ ದೇಶಭಕ್ತರು. ಪೆಷಾವರ್ ಜಿಲ್ಲೆಯ ಉತ್ಮಾನ್ ಜೈ ಎಂಬ ಹಳ್ಳಿಯಲ್ಲಿ 1890ನೆಯ ಜನವರಿಯಲ್ಲಿ ಹುಟ್ಟಿದರು. ಮಹಮ್ಮದ್ ಜೈ ಎಂಬ ಗುಂಪಿಗೆ ಸೇರಿದ ಬಹ್ರಾಮ್‍ಖಾನ್ ಎಂಬ ಶ್ರೀಮಂತ ವರ್ತಕ ಇವರ ತಂದೆ. ಅಣ್ಣ ಪ್ರಸಿದ್ಧನಾದ ಡಾಕ್ಟರ್ ಖಾನ್ ಸಾಹೇಬ್. ಇವರ ವಿದ್ಯಾಭ್ಯಾಸ ಪೆಷಾವರ್ ಮಿಷನ್ ಹೈಸ್ಕೂಲಿನಲ್ಲಿ ನಡೆಯಿತು. ಉನ್ನತ ವಿದ್ಯಾಭ್ಯಾಸ ಅಲಿಘರದ ಎಂ.ಎ.ಒ. ಕಾಲೇಜಿನಲ್ಲಿ ನಡೆಯಿತು. ಬ್ರಿಟಿಷರು ಮಾಡುತ್ತಿದ್ದ ಅತ್ಯಾಚಾರಗಳನ್ನು ನೋಡಿ, ಬ್ರಿಟಿಷ್ ಸೈನ್ಯಕ್ಕೆ ಸೇರುವ ಆಲೋಚನೆಯನ್ನು ಬಿಟ್ಟರು. 1912ರಿಂದ ಜನತಾ ಸೇವೆಗೆ ಪಣತೊಟ್ಟರು. ಗದ್ದಾರ್ ಎಂಬಲ್ಲಿ ಶಾಲೆಯನ್ನು ತೆಗೆದು ವಿದ್ಯಾಪ್ರಚಾರ ಮಾಡಲು ಪ್ರಾರಂಭಿಸಿದರು. ಇವರ ಚಟುವಟಿಕೆಗಳ ಮೇಲೆ ಸಂಶಯಪಟ್ಟಿದ್ದ ಬ್ರಿಟಿಷರು ಇವರನ್ನು ಬಂಧಿಸಿದರು (1919). ಹಿಜ್ರತ್ ಚಳವಳಿ ಕಾಲದಲ್ಲಿ ಆಫ್ಘಾನಿಸ್ಥಾನಕ್ಕೆ ಹೋಗಿ ಮರಳಿಬಂದರು. ಅಂಜುಮಾನ್ ಇಸ್ಲಾಂ-ಇ-ಅಪಾಪ್ಥನಾ ಸಂಸ್ಥೆಯನ್ನು ಸ್ಥಾಪಿಸಿ ಪಠಾಣರ ಸಮಾಜಸುಧಾರಣಾ ಕಾರ್ಯವನ್ನು ಪ್ರಾರಂಭಿಸಿದರು. 1927ರಲ್ಲಿ ಖುದಾ-ಇ-ಖಿದ್‍ಮತ್‍ಗಾರ್ ಸಂಸ್ಥೆಯನ್ನು ಸ್ಥಾಪಿಸಿ, ಪಖ್ತೂನ್ ಪತ್ರಿಕೆಯ ಮೂಲಕ ಜನರಿಗೆ ರಾಜಕೀಯ ತಿಳಿವಳಿಕೆ ಕೊಟ್ಟರು. ಮಹಾತ್ಮ ಗಾಂಧಿಯವರ ಪಟ್ಟಶಿಷ್ಯರಲ್ಲಿ ಒಬ್ಬರಾದ ಇವರನ್ನು ಗಡಿನಾಡಿನ ಜನರು ಬಾದ್‍ಷಾಖಾನ್ ಎಂದು ಕರೆಯುತ್ತಾರೆ. ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ಅನಂತರ ಇವರನ್ನು ಜೈಲಿನಲ್ಲಿಟ್ಟಿದ್ದರು. ಬಿಡುಗಡೆಯ ಅನಂತರ ಪಖ್ತೂನಿಸ್ಥಾನದ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದಾರೆ. ಇವರ ಸೇವೆಯನ್ನು ತ್ಯಾಗವನ್ನು ಗಮನಿಸಿ ಭಾರತಸರ್ಕಾರ ಜವಾಹರ್‍ಲಾಲ್‍ನೆಹ್ರೂ ಅಂತರರಾಷ್ಟ್ರೀಯ ಸೌಹಾರ್ದ ಪಾರಿತೋಷಕವನ್ನು ನೀಡಿದೆ (1968).												
(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ